ಯಂಗ್, ಫ್ರಾನ್ಸಿಸ್ ಬ್ರೆಟ್	
1884 - 1954. ಇಂಗ್ಲಿಷ್ ಕಾದಂಬರಿಕಾರ. ವುಸ್ರ್ಟರ್‍ಷೈರ್‍ನ ಹೇಲ್ಸ್ ಆವೆನ್‍ನಲ್ಲಿ ಹುಟ್ಟಿದ. ವೈದ್ಯ ಕುಟುಂಬದಿಂದ ಬಂದ ಈತ ತನ್ನ 14ನೆಯ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡ. ಸರ್ರೆಯ ಎಪ್ಸಮ್ ಕಾಲೇಜಿನಲ್ಲಿ ಓದಿ ಅನಂತರ ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾಲಯದ ವೈದ್ಯ ಪದವೀಧರನಾದ. 1907ರಲ್ಲಿ ಬ್ರಿಕ್ಸ್‍ಹ್ಯಾಮ್‍ನಲ್ಲಿ ವೈದ್ಯ ವೃತ್ತಿ ಆರಂಭಿಸಿದ. 1905ರಲ್ಲಿ ಜೆಸ್ಸಿ ಹ್ಯಾನ್‍ಕಿನ್ಸಿನ್ ಎಂಬ ಗಾಯಕಿಯನ್ನು ವಿವಾಹವಾದ. ವೃತ್ತಿಯಲ್ಲಿ ವೈದ್ಯನಾದರೂ ಸಂಗೀತದಲ್ಲಿ ವಿಶೇಷ ಆಸಕ್ತಿಯಿದ್ದ ಈತ ವಾದ್ಯವಾದನವನ್ನು ಅಭ್ಯಸಮಾಡಿದ್ದ. ಹಾಡುವವರಿಗೆ ಪಕ್ಕವಾದ್ಯ ನುಡಿಸುವುದು, ಹಾಡುಗಳಿಗೆ ರಾಗ ಸಂಯೋಜಿಸುವುದು, ಸ್ವತಃ ಗೀತೆಗಳನ್ನು ರಚಿಸುವುದು ಈತನ ಪ್ರಿಯವಾದ ಹವ್ಯಾಸಗಳಾಗಿದ್ದವು.

	ಯುದ್ಧ ಕಾಲದಲ್ಲಿ ಪೂರ್ವ ಆಫ್ರಿಕದ ರಾಯಲ್ ಆರ್ಮಿ ಮೆಡಿಕಲ್‍ಕೋರ್‍ನಲ್ಲಿ ಸೇವೆ ಸಲ್ಲಿಸಿದ. ಆ ವೇಳೆಯಲ್ಲಿ ಮಲೇರಿಯ ರೋಗಕ್ಕೀಡಾಗಿ ನಿಶ್ಯಕ್ತನಾದ. ಮೇಜರ್ ದರ್ಜೆಯಲ್ಲಿ ವೈದ್ಯ ಸೇವೆ ಸಲ್ಲಿಸುತ್ತಿದ್ದ ಈತ ಯುದ್ಧ ಮುಗಿದ ಬಳಿಕ ಹೆಂಡತಿಯೊಡನೆ ಕೇಫ್ರಿಗೆ ಹೋಗಿ 1929ರ ತನಕ ಅಲ್ಲಿ ನೆಲೆಸಿದ. ಅಲ್ಲಿಯ ಎಂಜಿನಿಯರ್ ಒಬ್ಬರ ಕಥೆಗಳನ್ನು ಇಟಲಿ ಭಾಷೆಯಿಂದ ಇಂಗ್ಲಿಷ್‍ಗೆ ಅನುವಾದಿಸಿ ಕೊಟ್ಟುದಕ್ಕೆ ಅವರು ಈತನಿಗೊಂದು ಮನೆ ಕಟ್ಟಿಸಿಕೊಟ್ಟರು. 1922ರಲ್ಲಿ ದಕ್ಷಿಣ ಆಫ್ರಿಕದ ಪ್ರವಾಸ ಮಾಡಿದ. ಅಮೆರಿಕಕ್ಕೂ ಎರಡು ಬಾರಿ ಹೋಗಿ ಬಂದ. 1932ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿ ಲೇಕ್‍ಡಿಸ್ಟ್ರಿಕ್ಟ್‍ನಲ್ಲಿ ಒಂದು ವರ್ಷಕಾಲವಿದ್ದು ಅನಂತರ ವುಸ್ರ್ಟರ್‍ಷೈರ್‍ನ ಪರ್‍ಷೋರ್ ಸಮೀಪದಲ್ಲಿ ನೆಲೆಸಿದ.

	ಈತ ತನ್ನ ಐದನೆಯ ವಯಸ್ಸಿನಿಂದಲೇ ಕವನಗಳನ್ನು ಬರೆಯತೊಡಗಿದ. 1927ರಲ್ಲಿ ಪೋಟ್ರೇಟ್ ಆಫ್ ಕ್ಲೇಯರ್ (ಲವ್ ಈಸ್ ಎನಫ್) ಎಂಬ ಕೃತಿಗೆ ಜೇಮ್ಸ್ ಟೇಯ್ಟ್‍ಬ್ಲ್ಯಾಕ್ ಸ್ಮಾರಕ ಬಹುಮಾನ ಪಡೆದ ಮೇಲೆ ಪ್ರಸಿದ್ಧನಾದ. ಅನಂತರ ಇಂಗ್ಲೆಂಡ್, ಅಮೆರಿಕ ದೇಶಗಳಲ್ಲಿ ಈತನ ಅಭಿಮಾನಿಗಳು ಹೆಚ್ಚಾದರು. ಮಹಾಕಾವ್ಯವೊಂದನ್ನು ಬರೆಯುವ ಆಶಯವಿಟ್ಟುಕೊಂಡಿದ್ದ. ಆದರೆ ಅದು ಈಡೇರಲಿಲ್ಲ. ಈತ ಹೆಚ್ಚಾಗಿ ಬರೆದದ್ದು ಗದ್ಯಕೃತಿಗಳನ್ನೇ. ಅಂಡರ್‍ಗ್ರೋತ್ ಎಂಬ ಮೊದಲನೆಯ ಕಾದಂಬರಿಯನ್ನು ತನ್ನ ಸೋದರ ಎರಿಕ್ ಬ್ರೆಟ್‍ನೊಂದಿಗೆ ಸೇರಿ ಬರೆದ. ಎರಡನೆಯದು ಡೀಪ್ ಸೀ. ತಾನೇ ಬರೆದ ಸ್ವಂತಿಕೆ ಇರುವ ಕೃತಿ. ಕಡಲು, ವೈದ್ಯಕ್ಷೇತ್ರ, ಸ್ವಲ್ಪಮಟ್ಟಿಗೆ ಯುದ್ಧ ಇತನ ಕೃತಿಗಳ ಮುಖ್ಯ ಹಿನ್ನೆಲೆ. ಈತನದು ಕವಿ ಹೃದಯ. ವಾಸ್ತವ ಸಂಗತಿ, ಇತಿಹಾಸ ಪಾತ್ರಗಳ ಬೆಳವಣಿಗೆಗೆ ವಿಶೇಷ ಗಮನ ಕೊಟ್ಟಿದ್ದಾನೆ.

	ಈತ 20 ಕಾದಂಬರಿಗಳನ್ನು ಬರೆದಿದ್ದಾನೆ. ಇವು ಸೊಗಸಾದ ಕೃತಿಗಳೆಂದು ಆ ಕಾಲಕ್ಕೆ ಮನ್ನಣೆ ಪಡೆದವು. ಈತ ಸೃಷ್ಟಿಸಿರುವ ಪಾತ್ರಗಳೆಲ್ಲ ವಿನಯ, ಸೌಜನ್ಯಗಳಿಂದ ಕೂಡಿದುದಾಗಿದೆ.

	ಅಂಡರ್ ಗ್ರೋತ್ (1912), ಡೀಪ್ಸೀ (1914), ದ ಡಾರ್ಕ್ ಟವರ್ (1914), ದ ಕ್ರೆಸೆಂಟ್ ಮೂನ್ (1918), ಈಸ್‍ಲವ್ ಎನಫ್ (1927), ದಿ ಕೀ ಆಫ್ ಲೈಫ್ (1928), ಬ್ಲ್ಯಾಕ್ ರೋಸಸ್ (1929), ಮಾರ್ಚಿಂಗ್ ಆನ್ ಟಾಂಗಾ (1918), ದಿ ಯಂಗ್ ಫಿಜಿಶಿಯನ್ ಲವ್ (1919), ದ ಲಿಟ್ಲ್ ವಲ್ರ್ಡ್ 91934), ವ್ಹೈಟ್ ಲೇಡೀಸ್ (1935), ದಿ ಸಿಟಿ ಆಫ್ ಗೋಲ್ಡ್ (1939), ದ ಮ್ಯಾನ್ ಎಬೌಟ್ ದ ಹೌಸ್ (1942) - ಇವು ಈತನ ಕಾದಂಬರಿಗಳು. ಫೈವ್ ಡಿಗ್ರೀಸ್ ಸೌತ್ (1917), ಪೊಯೆಮ್ಸ್ (1916 - 18). ದ ಐರ್ಲೆಂಡ್ (1944 ಇಂಗ್ಲೆಂಡ್ ಕುರಿತ ನೀಳ್ಗವಿತೆ) - ಇವು ಈತನ ಕವನ ಸಂಕಲನಗಳು. ದ ಕೇಜ್ ಬರ್ಡ್ ಅಂಡ್ ಅದರ್ ಸ್ಟೋರೀಸ್ (1933), ಷಿಪ್ಸ್ ಸರ್ಜನ್ಸ್ ಟೇಲ್ಸ್ ಅಂಡ್ ಅದರ್ ಸ್ಟೋರೀಸ್ (1940) - ಇವು ಕಥಾ ಸಂಗ್ರಹಗಳು. ಕ್ಯಾಪ್ಟನ್ ಸ್ವಿಂಗ್ (1919), ದ ಫರ್ನೆಸ್ (1928) - ಇವು ನಾಟಕಗಳು.

	ಇವನು 1954ರಲ್ಲಿ ಕೇಪ್‍ಟೌನ್‍ನಲ್ಲಿ ನಿಧನ ಹೊಂದಿದ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ